ಬ್ರೌನಿಂಗ್, ರಾಬರ್ಟ್ 1812-89. ವಿಕ್ಟೋರಿಯ ಯುಗದ ಇಂಗ್ಲಿಷ್ ಕವಿ. 1812 ಮೇ, 7ರಂದು ಲಂಡನ್‍ನಲ್ಲಿ ಜನಿಸಿದ. ತಂದೆ ರಾಬರ್ಟ್ ಬ್ರೌನಿಂಗ್ ತಾಯಿ ಸಾರಾ ಅನ್ನಾ ವೀಡಿಮನ್. ಓದಿನ ಬಗ್ಗೆ ಪ್ರೇಮ ಮತ್ತು ಸಾಹಿತ್ಯ ರಚನೆಯ ಬಗ್ಗೆ ಆಸಕ್ತಿ ತಂದೆಯಿಂದಲೂ ಸೂಕ್ಷ್ಮತೆ, ಸಂಗೀತದ ಬಗ್ಗೆ ಒಲವು, ಧಾರ್ಮಿಕ ವಿಷಯಗಳಲ್ಲಿ ಶ್ರದ್ಧೆಯನ್ನು ತಾಯಿಯಿಂದ ರೂಢಿಸಿಕೊಂಡ ಬ್ರೌನಿಂಗ್ ಶಾಲೆಯ ಕಲಿಕೆಗಿಂತ ಸ್ವಪರಿಶ್ರಮದಲ್ಲಿ ಕಲಿತದ್ದೇ ಹೆಚ್ಚು. ಸಂಗೀತದಲ್ಲಿ, ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳಲ್ಲಿ ಪರಿಶ್ರಮ ಪಡೆದುಕೊಂಡ ಈತ ಚಿಕ್ಕಂದಿನಿಂದಲೇ ಸಾಹಿತ್ಯಸೃಷ್ಟಿ ಕೈಗೊಂಡನಾದರೂ ಶೆಲ್ಲಿ ಹಾಗೂ ಕೀಟ್ಸ್ ಕವಿಗಳನ್ನು ಓದಿದ ಅನಂತರ ತಾನೂ ಕವಿಯಾಗಬೇಕೆಂಬ ಹೆಬ್ಬಯಕೆಯಿಂದ ಕಾವ್ಯರಚನೆಗೆ ತೊಡಗಿದ. ಪಾವ್‍ಲಿನ್: ಎ ಫ್ರಾಗ್ಮೆಂಟ್ ಅಫ್ ಎ ಕನ್‍ಫೆಶನ್ ಎಂಬುದು ಇವನ ಮೊದಲ ಪ್ರಕಟಿತ ಕವನ (1833). ಪರಸೆಲ್ಸಸ್ ಎಂಬುದು ನಾಟಕೀಯ ಕವನ (1835). ಶೆಲ್ಲಿ ಕವಿಯ ಪ್ರಭಾವ ಈ ಕೃತಿಯ ಮೇಲೆ ಗಾಢವಾಗಿ ಆಗಿದೆ. ಆದರೂ ಈ ಕೃತಿಯ ಪ್ರಕಟಣೆ ಕವಿಗೆ ಅಂದಿನ ಸಾಹಿತ್ಯ ವಲಯದಲ್ಲಿ ಹೆಸರು ತಂದು ಕೊಟ್ಟಿತು.

	ಇವನ ಕಾವ್ಯ ಜೀವನದ ಮುಖ್ಯ ಮಜಲು 1837ರಲ್ಲಿ ಆರಂಭವಾಯಿತು. ಅಂದಿನಿಂದ ಸುಮಾರು ಒಂದು ದಶಕದ ಕಾಲ ಈತ ನಾಟಕರಚನೆಯಲ್ಲಿ ತೊಡಗಿದ. 1837ರಲ್ಲಿ ಪ್ರಕಟವಾದ ಇವನ ಮೊದಲ ನಾಟಕ 'ಸ್ಟ್ರಾಫರ್ಡ್. ಈ ದುರಂತ ನಾಟಕ ರಂಗಭೂಮಿಯ ಮೇಲೆ ಕೇವಲ ಐದು ದಿನಗಳು ಮಾತ್ರ ಪ್ರದರ್ಶಿತವಾಯಿತು. ಈ ಅನುಭವ ಕವಿಯ ಮನಸ್ಸಿಗೆ ಬಹುವಾಗಿ ಯಾತನೆ ಉಂಟು ಮಾಡಿತು. ಕಿಂಗ್ ವಿಕ್ಟರ್ ಅಂಡ್ ಕಿಂಗ್ ಚಾಲ್ರ್ಸ್ (1842), ದಿ ರಿಟರ್ನ್ ಅಫ್ ದಿ ಡ್ರೂಸಸ್ (1843). ಎ ಬ್ಲಾಟ್ ಇನ್ ದಿ ಸ್ಕಚಿಯನ್ (1844), ಕೊಲಂಬಿಸ್ ಬರ್ತ್‍ಡೆ (1844), ಲ್ಯೂರಿಯ (1846), ಎ ಸೌಲ್ಸ್ ಟ್ರಾಜಿಡಿ ಇವು ಇವನ ಇತರ ನಾಟಕಗಳು 'ಪಿಪ್ಪ ಪಾಸಸ್ ಕಟ್ಟುನಿಟ್ಟಾಗಿ ನಾಟಕವೆನ್ನಿಸಿಕೊಳ್ಳದಿದ್ದರೂ ನಾಟಕದ ರೂಪ ಉಳಿಸಿಕೊಂಡ ಒಂದು ಕೃತಿಯಾಗಿದೆ. ನಾಟಕೀಯ ಏಕಪಾತ್ರ ಭಾಷಣ (ಡ್ರಮ್ಯಾಟಿಕ್ ಮಾನೊಲಾಗ್) ರೂಪದ ಮೇಲೆ ಅಸಾಧಾರಣ ಪ್ರಭುತ್ವ ಸ್ಥಾಪಿಸಿದ ಇವನ ನಾಟಕಗಳು ಆಸಕ್ತಿ ಕೆರಳಿಸುವಂಥವು. ಒಂದು ಆತ್ಮದ ಬೆಳೆವಣಿಗೆ ಅಥವಾ ಪತನ ಬ್ರೌನಿಂಗನಿಗೆ ವಿಶೇಷ ಆಸಕ್ತಿಯ ವಿಷಯ. ಮಾನವ ಸ್ವಭಾವದ ವೈವಿಧ್ಯ ವೈಚಿತ್ರಗಳು ಬ್ರೌನಿಂಗನಿಗೆ ಸದಾ ಕುತೂಹಲ ಕೆರಳಿಸುವ ಅಂಶಗಳಾಗಿದ್ದುವು. ವ್ಯಕ್ತಿಯ ಮಾತುಗಳಿಂದ ಅವರ ವಿವಿಧ ಮುಖಗಳನ್ನು ಅವರ ವ್ಯಕ್ತಿತ್ವದ ಪದರ ಪದರಗಳನ್ನು ಬಿಡಿಸಿ ತೋರಿಸುವುದರಲ್ಲಿ ಬ್ರೌನಿಂಗ್ ಯಶಸ್ವಿಯಾಗಿದ್ದಾನೆ. ಆದ್ದರಿಂದಲೇ ಇವನ ನಾಟಕೀಯ ಏಕಪಾತ್ರ ಭಾಷಣಗಳು ಓದುಗರನ್ನು ಸೆರೆಹಿಡಿಯುತ್ತವೆ. ಆದರೆ ಅವನ ನಾಟಕಗಳು ಹೆಚ್ಚು ಕ್ರಿಯಾತ್ಮಕವೆನಿಸುವುದಿಲ್ಲ. ನಾಟಕದ ಜಗತ್ತು ನಮ್ಮ ಜಗತ್ತಿನಂತೆ ಎಂದು ಭಾಸವಾಗಲು ಅಗತ್ಯವಾದ ಘಟನೆಗಳ ವಿವರಗಳ ಮತ್ತು ಮನಸ್ಥಿತಿಗಳ ವೈವಿಧ್ಯ ನಾಟಕಗಳಲ್ಲಿ ಕಾಣುವುದಿಲ್ಲ ತನ್ನ ಪಾತ್ರಗಳಲ್ಲಿ ಬ್ರೌನಿಂಗ್ ತನ್ನನ್ನು ಮರೆಯಲಾರ. ಅಲ್ಲದೆ ಹೊರಜಗತ್ತು ಇವನ ಪಾತ್ರಗಳ ಮೇಲೆ ಯಾವ ಪ್ರಭಾವವನ್ನೂ ಬೀರುವಂತೆ ಕಾಣುವುದಿಲ್ಲ. ಪಿಪ್ಪ ಪಾಪಸ್ ವಿಶಿಷ್ಟವಾದ ಆಕರ್ಷಣೀಯ ಕೃತಿ. ತನಗೆ ಅರಿವಿಲ್ಲದಂತೆ ತನ್ನ ಉಲ್ಲಾಸದಿಂದ, ಹಾಡುಗಳಿಂದ ಇತರರ ಬಾಳಿನಲ್ಲಿ ಅಸಾಧಾರಣ ಪ್ರಭಾವವನ್ನು ಬೀರುವ ಹುಡುಗಿಯ ಕತೆ ಇದು. ಡ್ರಮ್ಯಾಟಿಕ್ ಲಿರಿಕ್ಸ್ (1842), ಡ್ರಮ್ಯಾಟಿಕ್ ರೋಮಾನ್ಸಸ್ ಅಂಡ್ ಲಿರಿಕ್ಸ್ (1845), ಮೆನ್ ಅಂಡ್ ವುಮನ್ (1855), ಡ್ರಮ್ಯಾಟಿಸ್ ಪರ್ಸೋನೆ (1864), ದಿ ರಿಂಗ್ ಅಂಡ್ ದಿ ಬುಕ್ (1868-69)-ಇವು ಇವನ ಮುಖ್ಯ ಕವನ ಸಂಕಲನಗಳು.

 ಬ್ರೌನಿಂಗ್ 1846ರಲ್ಲಿ ಎಲಿಜಬತ್ ಬ್ಯಾರೆಟ್ ಎಂಬುವಳನ್ನು ಮದುವೆಯಾಗಿದ್ದ. ಈಕೆ ಕೂಡ ಆ ಕಾಲದಲ್ಲಿ ಪ್ರಸಿದ್ಧ ಕವಯಿತ್ರಿ ಎಂದು ಹೆಸರು ಗಳಿಸಿದ್ದಳು. 1889 ಡಿಸೆಂಬರ್ 12ರಂದು ನಿಧನ ಹೊಂದಿದ. ವೆಸ್ಟ್‍ಮಿನಿಸ್ಟರ್ ಅಬೆ ಎಂಬಲ್ಲಿ ಇವನ ಸಮಾಧಿ ಇದೆ. 

ವಿಜ್ಞಾನದ ಶೋಧನೆಗಳಿಂದ ಜನತೆಗೆ ಧರ್ಮದಲ್ಲಿ ನಂಬಿಕೆ ಕಡಿಮೆಯಾಗಿ ಆಧ್ಯಾತ್ಮಿಕ ತಳಮಳ ಉಂಟಾದ ಯುಗದಲ್ಲಿ ದೇವರ ಅಸ್ತಿತ್ವದಲ್ಲಿಯೂ ಕರುಣೆ ಮತ್ತು ನ್ಯಾಯಗಳಲ್ಲಿಯೂ ಗಾಢವಾದ ನಂಬಿಕೆಯನ್ನು ಸಾರಿದ ಕವಿ ಬ್ರೌನಿಂಗ್. ಇವನ ಯಶಸ್ವಿ ಕವನಗಳಲ್ಲಿ ಅನೇಕ ಅವಿಸ್ಮರಣೀಯ ಪಾತ್ರಗಳನ್ನು ಸೃಷ್ಟಿಸಿದ. ಕೆಲವು ವಿಶಿಷ್ಟವಾದ ಪ್ರೇಮಕವನಗಳನ್ನು ರಚಿಸಿದ. ಆದರೆ ಇವನ ಶೈಲಿ ಹಲವೊಮ್ಮೆ ಕಠಿಣವಾಗಿದ್ದು, ವಿಚಿತ್ರ ರಚನೆಗಳಿಂದ ತುಂಬಿದ್ದುದರಿಂದ ಇವನ ಕವನಗಳನ್ನು ಓದುವುದು ಸಾಮಾನ್ಯ ಕಾವ್ಯಪ್ರಿಯರಿಗೆ ಕಷ್ಟವಾಯಿತು. ಮನಸ್ಸಿನ ಹಲವು ಪದರಗಳಲ್ಲಿ ಕೆಲಸ ಮಾಡುವುದನ್ನು ನಿರೂಪಿಸಬಯಸಿದ ಇವನು ತನ್ನ ಕಾಲದ ಇತರ ಕವಿಗಳಿಗಿಂತ ಸಂಕೀರ್ಣ ಕವಿ.									(ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ